ವಾಮನರಾವ್ ಮಾಸ್ತರ
	1883-1935. ಹೆಸರಾಂತ ರಂಗಭೂಮಿ ನಟ ಮತ್ತು ನಾಟಕಕಾರ. ರಬಕವಿಯಲ್ಲಿ 1883ರಲ್ಲಿ ಜನಿಸಿದರು. ಆಗಿನ ಮುಲ್ಕಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ರಬಕವಿ ಹಾಗೂ ಬಾಗಲಕೋಟೆಗಳಲ್ಲಿ ಸ್ವಲ್ಪಕಾಲ ಶಾಲಾಮಾಸ್ತರಾಗಿ ಕೆಲಸಮಾಡಿದರು. ಚಿಕ್ಕಂದಿನಲ್ಲಿಯೇ ಸಂಗೀತದಲ್ಲಿ ಆಸಕ್ತಿ ವಹಿಸಿದ್ದ ಇವರು ಗೆಳೆಯರೊಬ್ಬರ ನೆರವಿನಿಂದ ರಂಗಭೂಮಿಯನ್ನು ಪ್ರವೇಶಿಸಿದರು. ಹಾಗೆ ಇವರು ಮೊದಲು ಪ್ರವೇಶಿಸಿದ್ದು ಬಾಗಲಕೋಟೆಯಲ್ಲಿದ್ದ ಶಿರಹಟ್ಟಿ ವೆಂಕೋಬರಾಯರ ನಾಟಕ ಸಂಸ್ಥೆಯನ್ನು. ಪ್ರಾರಂಭದಲ್ಲಿ ಗಾಯಕರಾಗಿ, ಅನಂತರ ನಟರಾದ ಇವರು ಆ ನಾಟಕ ಕಂಪನಿಯ ಇತರ ಪಾತ್ರಧಾರಿಗಳಿಗೆ ಹಾಡು ಮತ್ತು ಮಾತುಗಳನ್ನು ಕಲಿಸುವ ಕೆಲಸವನ್ನೂ ಮಾಡಿದರು. ಇದರಿಂದಾಗಿ ಇವರು ಮಾಸ್ತರ್ ಎಂಬ ಅಭಿಧಾನಕ್ಕೂ ಪಾತ್ರರಾದರು. ಒಳ್ಳೆಯ ಮೈಕಟ್ಟು ಹಾಗೂ ಸಹಜ ಅಭಿನಯಗಳನ್ನು ಹೊಂದಿದ್ದ ವಾಮನರಾಯರು ಪೌರಾಣಿಕ ಹಾಗೂ ಸಾಮಾಜಿಕ ನಾಟಕಗಳಲ್ಲಿ ಅನೇಕ ಪಾತ್ರಗಳನ್ನು ಅಭಿನಯಿಸಿ ಹೆಸರಾದರು. ಇವರಿಗೆ ಅಖಿಲ ಕರ್ನಾಟಕ ಮಟ್ಟದ ಖ್ಯಾತಿ ತಂದುಕೊಟ್ಟಿದ್ದು-ಕವಿರತ್ನ ಕಾಳಿದಾಸ ನಾಟಕದ ಕಾಳಿದಾಸನ ಪಾತ್ರ. 1910ರಲ್ಲಿ ಮೈಸೂರು ಅರಮನೆಯಲ್ಲಿ ಪ್ರದರ್ಶಿಸಿದ ಭೋಜಪ್ರಬಂಧ ನಾಟಕದಲ್ಲಿನ ಅಭಿನಯಕ್ಕಾಗಿ ನಾಲ್ವಡಿ ಕೃಷ್ಣರಾಜ ಒಡೆಯರಿಂದ ಇವರಿಗೆ ಸುವರ್ಣ ಪದಕವೂ ಲಭಿಸಿತು. 

	ಇವರು ತಾವೇ ಸ್ವತಂತ್ರವಾಗಿ ಕೆಲವು ನಾಟಕ ಗಳನ್ನು ಬರೆದು ಅವುಗಳಲ್ಲಿ ಅಭಿನಯಿಸಿದರಲ್ಲದೆ ವಿಶ್ವಗುಣಾದರ್ಶ ನಾಟಕ ಮಂಡಳಿ ಎಂಬ ಸ್ವತಂತ್ರ ನಾಟಕ ಮಂಡಳಿಯನ್ನು ಆರಂಭಿಸಿ ಸು.20 ವರ್ಷಗಳಕಾಲ (1914-34) ನಡೆಸಿದರು. ಈ ನಾಟಕ ಮಂಡಳಿ ಕರ್ನಾಟಕದ ನಾನಾ ಸ್ಥಳಗಳಲ್ಲಿ ಭಕ್ತಪುಂಡಲೀಕ, ವೀರ ಅಭಿಮನ್ಯು, ಬಾಜೀರಾವ್ ಪೇಶ್ವೆ, ಸಂತ ಸಖೂಬಾಯಿ ಮುಂತಾದ ಪೌರಾಣಿಕ, ಐತಿಹಾಸಿಕ ಹಾಗೂ ಸಾಮಾಜಿಕ ನಾಟಕಗಳನ್ನು ಪ್ರದರ್ಶಿಸಿ ಬಹಳ ಜನಪ್ರಿಯವಾಯಿತು. ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಕೃಷ್ಣ ರಾಜ ಒಡೆಯರ್ ಅವರ ಸಮ್ಮುಖದಲ್ಲಿ ಇದೇ ನಾಟಕ ಸಂಸ್ಥೆಯವರು ಮಹಾನಂದ ಮತ್ತು ಭಕ್ತಪುಂಡಲೀಕ ಎಂಬ ಎರಡು ನಾಟಕಗಳನ್ನು ಅಭಿನಯಿಸಿ ಪ್ರಭುಗಳ ಮೆಚ್ಚುಗೆಗೂ ಪಾತ್ರರಾದರು. 

	ಮೂರು ದಶಕಗಳ ಕಾಲ ರಂಗಭೂಮಿಯ ಸೇವೆ ಮಾಡಿದ ಇವರು ತಮ್ಮ ಬದುಕಿನ ಕೊನೆಯ ದಿನಗಳನ್ನು ಧಾರವಾಡದಲ್ಲಿ ಕಳೆದು ತಮ್ಮ ಐವತ್ತೆರಡನೆಯ ವಯಸ್ಸಿನಲ್ಲಿ ನಿಧನರಾದರು.  			
		    (ಎನ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ